
ಬ.ಬಾಗೇವಾಡಿ : ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ರಾಹುಲ್ ಶಿಂದೆ ಅವರು ಸೆಪ್ಟೆಂಬರ್ 22ರಂದು ಬಸವನಬಾಗೇವಾಡಿ ತಾಲೂಕಿನ ಯರನಾಳ, ಹುಣಶ್ಯಾಳ ಪಿ.ಬಿ ಹಾಗೂ ಹೂವಿನಹಿಪ್ಪರಗಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಯರನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಿರ್ಮಾಗೊಂಡಿರುವ ತೆರೆದ ಬಾವಿ ಕಾಮಗಾರಿ ವೀಕ್ಷಣೆ ಮಾಡಿದರು. ಯರನಾಳ ಹಾಗೂ ಹುಣಶ್ಯಾಳ ಪಿ.ಬಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಜಲಜೀವನ ಮಿಷನ್ ಯೋಜನೆಯಡಿ ನಿರ್ಮಾಣವಾಗಿರುವ ಪ್ರತಿ ಮನೆ-ಮನೆಗೂ ಕಾರ್ಯಾತ್ಮಕ ನಳ ಸಂಪರ್ಕ ಕಾಮಗಾರಿಯ ನಳಗಳ ಜೋಡಣೆ ಪರಿಶೀಲಿಸಿ ನಳಗಳಲ್ಲಿ ನೀರು ಬರುತ್ತಿರುವುದನ್ನು ಪರೀಕ್ಷಿಸಿದರು.ಪೈಪ್ಲೈನ್‌ಗಾಗಿ ಅಗೆದ ಸಿ.ಸಿ ರಸ್ತೆಯನ್ನು ಮರು ನಿರ್ಮಾಣ ಮಾಡಿರುವುದನ್ನು ಪರಿಶೀಲಿಸಿದರು. ಗ್ರಾಮೀಣ ಜನರು ಕುಡಿಯಲು ನೀರು ಯೋಗ್ಯವಿದೆಯೋ ಇಲ್ಲವೋ ಎಂಬುದರ ಬಗ್ಗೆ ಅಲ್ಲಿನ ಗ್ರಾಮಸ್ಥರ ಜೊತೆ ಚರ್ಚಿಸಿದರು.

ಗ್ರಾಮಗಳಲ್ಲಿ ಹಳೆಯ ನಳಗಳ ಮೂಲಕ ಎರಡು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿತ್ತು. ಈ ಯೋಜನೆ ಜಾರಿ ಬಂದ ಮೇಲೆ ನಮಗೆ ಪ್ರತಿದಿನ ನೀರು ಪೂರೈಕೆಯಾಗುತ್ತಿದೆ. ಮೊದಲಿಗಿಂತ ಶೇ.50ರಷ್ಟು ನೀರು ಉಳಿತಾಯಾಗುತ್ತಿದೆ ಎಂದು ಅಲ್ಲಿನ ಸಾರ್ವಜನಿಕರು ಇದೆ ವೇಳೆ ಪ್ರತಿಕ್ರಿಯಿಸಿದರು.
ಇದೇ ವೇಳೆ ಸಿಇಓ ಅವರು, ಗ್ರಾಮೀಣ ಜನರಿಗೆ ನಳಗಳ ಮೂಲಕ ಉತ್ತಮ ಗುಣಮಟ್ಟದ ಕುಡಿಯುವ ನೀರನ್ನು ಪೂರೈಕೆ ಮಾಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಹೂವಿನ ಹಿಪ್ಪರಗಿ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಘನತ್ಯಾಜ್ಯ ವಿಲೇವಾರಿ ಘಟಕ, ಸಮುದಾಯ ಭವನ ಹಾಗೂ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳ ಕುರಿತು ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಸದರಿ ಕಾಮಗಾರಿಗಳನ್ನು ತುರ್ತಾಗಿ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಬಸವನಬಾಗೇವಾಡಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಚೆಲುವಯ್ಯ, ಕಾರ್ಯನಿರ್ವಾಹಕ ಅಭಿಯಂತರ ಚಂದ್ರಶೇಖರ ಚವ್ಹಾಣ್, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಎಸ್.ಬಿ.ಪಾಟೀಲ, ಯರನಾಳ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವಿ ಗುಂಡಳ್ಳಿ, ಹುಣಶ್ಯಾಳ ಪಿ.ಬಿ ಮತ್ತು ಹೂವಿನ ಹಿಪ್ಪರಗಿ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿ ಬಿ.ಎಮ್ ಬಿಳೇಕುದರಿ ಹಾಗೂ ಇತರರು ಹಾಜರಿದ್ದರು.
