
ಸಿಂದಗಿ: ಕಳೆದ ಅರವತ್ತು ವರ್ಷಗಳಿಂದ ಪ್ರಗತಿಯ ಹಾದಿಯಲ್ಲಿ ಮುನ್ನುಗುತ್ತಿರುವ ದಿ.ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ್ ಜಿಲ್ಲೆಯಲ್ಲಿಯೇ ಉನ್ನತಿಕರಣ ಹೊಂದಿದ ಬ್ಯಾಂಕು ಎಂಬ ಹೆಗ್ಗಳಿಕೆಯಿದೆ ಎಂದು ವಿಜಯಪುರ ಬಿಎಲ್‌ಡಿಇ ನಿರ್ದೇಶಕ ಹಾಗೂ ಗಣ್ಯ ವರ್ತಕ ಅಶೋಕ ವಾರದ ಹೇಳಿದರು.
ರವಿವಾರ ನಗರದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ಜರುಗಿದ ದಿ.ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕಿನ 58ನೇ ವಾರ್ಷಿಕ ಸರ್ವ ಸಾಧಾರಣ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಪಟ್ಟಣದ ಹಿರಿಯರು ಅರವತ್ತು ವರ್ಷಗಳ ಹಿಂದೆ ಕಂಡ ಆರ್ಥಿಕ ಕನಸು ಇದೀಗ ನನಸಾಗಿದೆ. ಇಲ್ಲಿನ ನಿರ್ದೇಶಕರು ಸೇವಕರಂತೆ ಹೆಚ್ಚಿನ ಮುತುವರ್ಜಿಯಿಂದ ಕೆಲಸ ಮಾಡುತ್ತ ಆರ್ಥಿಕ ಸಬಲತೆ ಕಾಣಬೇಕಿದೆ ಎಂದರು.
ಅಧ್ಯಕ್ಷ ಬಸವರಾಜ ಶಹಾಪೂರ ವಾರ್ಷಿಕ ವರದಿ ವಾಚಿಸಿ, ಬ್ಯಾಂಕು ರೂ. 89.47 ಲಕ್ಷ ನಿವ್ವಳ ಲಾಭ ಗಳಿಸಿದೆ. ಇದರಲ್ಲಿ ಸದಸ್ಯರಿಗೆ ಪ್ರತಿಶತ ೮ರಷ್ಟು ಲಾಭಾಂಶ ನೀಡಲಾಗುತ್ತಿದೆ. ಸಾಲ ಪಡೆದವರು ಬ್ಯಾಂಕಿನ ಏಳ್ಗೆಗೆ ಸಾಲದ ಕಾಲ ಮಿತಿಯಲ್ಲಿ ಪಾವತಿಸುವುದರ ಜತೆಗೆ ಜಾಮೀನುದಾರರು ಸಾಲ ಪಾವತಿ ಬಗ್ಗೆ ಎಚ್ಚರವಹಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾಜಿ ಅಧ್ಯಕ್ಷ ಶರಣಪ್ಪ ವಾರದ, ಬ್ಯಾಂಕು ಈಗಾಗಲೇ ಆನ್‌ಲೈನ್ ವ್ಯವಸ್ಥೆ ಹೊಂದಿದೆ. ಹೆಚ್ಚುವರಿಯಾಗಿ ವಿಜಯಪುರ ಸೇರಿದಂತೆ ಇನ್ನೊಂದು ಪಟ್ಟಣದಲ್ಲಿ ಶಾಖೆಗಳನ್ನು ತೆರೆಯುವುದರ ಜತೆಗೆ ಸದಸ್ಯರಿಗೆ ಎಟಿಎಂ ಸೌಲಭ್ಯ ಶೀಘ್ರದಲ್ಲಿಯೇ ಒದಗಿಸಲಾಗುತ್ತಿದೆ. ಸದಸ್ಯರು ಸಾಲ ಬಾಕಿ ಇರಿಸದೇ ಬ್ಯಾಂಕಿನ ಪ್ರಗತಿಗೆ ಸಹಕಾರ ನೀಡಬೇಕು ಎಂದರು. ಸದಸ್ಯ ಮುಸ್ತಾಕ್ ಮುಲ್ಲಾ ಹಾಗೂ ಅವಧೂತ್ ಜೋಶಿ ಅವರು ಸಲಹೆಗಳನ್ನು ನೀಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಸಿದ್ಲಿಂಗಪ್ಪ ವಡ್ಡೋಡಗಿ, ನಿರ್ದೇಶಕ ನಿಹಾಲಚಂದ್ ಪೋರವಾಲ, ನೀಲಕಂಠ ಗುಣಾರಿ, ಪ್ರಕಾಶ ಕೋರಿ, ರವಿಕುಮಾರ ನಾಗೂರ, ಲಕ್ಷ್ಮಣ ದೊಡಮನಿ, ಡಾ.ವಿಜಯಕುಮಾರ ವಾರದ, ಷಣ್ಮುಖಪ್ಪ ಸಂಗಮ, ಸುರೇಶಬಾಬು ಜೋಗೂರ, ಶ್ರೀಮತಿ ಎಂ.ಜಿ.ಬಮ್ಮಣ್ಣಿ, ಎಂ.ಸಿ.ಪಟ್ಟಣಶೆಟ್ಟಿ, ಚನಮಲ್ಲಪ್ಪ ಶಹಪೂರ, ಶಿವಲಿಂಗಯ್ಯ ಗಾಳೀಮಠ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಂ.ಜಿ.ಬಮ್ಮಣ್ಣಿ ಇದ್ದರು. ಬ್ಯಾಂಕಿನ ಆರು ಶಾಖೆಗಳ ಸಿಬ್ಬಂದಿ ಹಾಗೂ ಸದಸ್ಯರು ಸಭೆಯಲ್ಲಿ ಹಾಜರಿದ್ದರು.
