
ವಿಜಯಪುರ : ತಂಬಾಕಿನ ಉತ್ಪನ್ನಗಳ ಬಳಕೆಯಿಂದ ಉಂಟಾಗುವ ತೊಂದರೆ ಮತ್ತು ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಬಿ.ದಾನಮ್ಮನವರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ತಂಬಾಕು ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಎಲ್ಲ ಶಾಲಾ-ಕಾಲೇಜ್ ಆವರಣದ ೧೦೦ ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟವಾಗದಂತೆ ಕ್ರಮವಹಿಸಬೇಕು, ಅದರಂತೆ ತಂಬಾಕು ನಿಷೇಧ ಕೊಟ್ಪಾ ಕಾಯ್ದೆ ಫಲಕಗಳನ್ನು ಕಡ್ಡಾಯವಾಗಿ ಎಲ್ಲ ಶಾಲಾ-ಕಾಲೇಜ್ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಪ್ರದರ್ಶನ ಮಾಡಬೇಕು. ಕಾನೂನನ್ನು ಉಲ್ಲಂಘಿಸಿ ತಂಬಾಕು ಉತ್ಪನ್ನ ಮಾರಾಟ ಮಾಡುವ ವ್ಯಾಪಾರಸ್ಥರ ಮೇಲೆ ಕ್ರಮ ವಹಿಸಿ ದಂಡ ವಿಧಿಸಿ ಜನರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭಾರತ ಸರ್ಕಾರವು ತಂಬಾಕು ಉತ್ಪನ್ನಗಳ ಉತ್ಪಾಧನೆ, ಸರಬರಾಜು ಮತ್ತು ಮಾರಾಟದ ಮೇಲೆ ನಿಯಂತ್ರಣ ಹೇರಲು 2003 ರಲ್ಲಿThe Cigarettes and other tobacco Products (COTPA) Act-2003 ಎಂಬ ಕಾಯ್ದೆಯನ್ನು ಜಾರಿಗೆ ತಂದಿದ್ದು ಎಲ್ಲ ತಂಬಾಕು ವ್ಯಾಪಾರಸ್ತರು ಕೊಟ್ಪಾ ನಿಯಮಗಳನ್ನು ಪಾಲಿಸುವದು ಕಡ್ಡಾಯವಾಗಿದೆ. ಕೊಟ್ಪಾ ಕಾಯ್ದೆ ಉಲ್ಲಂಘಿಸುವ ವ್ಯಾಪಾರಸ್ಥರಿಗೆ ದಂಡ ವಿಧಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ತಂಬಾಕು ಉತ್ಪನ್ನಗಳ ಬಳಕೆಯಿಂದ ಉಂಟಾಗುವ ಸಾವು ನೋವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಜನರು ತಂಬಾಕು ಉತ್ಪನ್ನಗಳಿಂದ ದೂರ ಉಳಿಯುವಂತೆ ಪ್ರೆರೇಪಿಸಬೇಕು. ಈ ವರ್ಷದ ಧ್ಯೇಯ: “ತಂಬಾಕು ಪರಿಸರಕ್ಕೆ ಮಾರಕ”. ಈ ದಿನದಂದು ತಂಬಾಕಿನ ಎಲ್ಲ ರೀತಿಯ ಉತ್ಪನ್ನಗಳಿಂದ ದೂರವಿದ್ದು ತಂಬಾಕಿನ ಉತ್ಪನ್ನಗಳ ಬಳಕೆಯಿಂದ ಉಂಟಾಗುವ ತೊಂದರೆ ಮತ್ತು ದುಷ್ಪರಿಣಾಮಗಳ ಕುರಿತು ಜನರಿಗೆ ತಿಳಿಸುವ ಕಾರ್ಯವನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ತಂಬಾಕು, ಧೂಮಪಾನ ದುಷ್ಪರಿಣಾಮ ಕುರಿತಂತೆ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಇಂತಹ ದುಶ್ಚಟಗಳಿಗೆ ಪೂರ್ಣ ವಿರಾಮದ ಕಾರ್ಯ ಪ್ರತಿಯೊಂದು ಮನೆಯಿಂದ ಪ್ರಾರಂಭವಾಗಬೇಕು. ವಿಶ್ವ ತಂಬಾಕು ರಹಿತ ದಿನದಂದು ಎಲ್ಲ ರೀತಿಯ ತಂಬಾಕಿನ ಉತ್ಪನ್ನಗಳಿಗೂ ಗುಡ್ ಬೈ ಹೇಳಿ, ಅವುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು. ಈ ತಂಬಾಕು ರಹಿತ ದಿನಾಚರಣೆ ಪ್ರತಿ ದಿನ, ಪ್ರತಿ ಕ್ಷಣ ನಡೆಯುವಂತಾಗಬೇಕು. ಎಲ್ಲ ಓಕೆ ತಂಬಾಕು ಯಾಕೆ ಎಂಬ ಘೋಷವಾಕ್ಯದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಂತೆ ಅವರು ಸೂಚನೆ ನೀಡಿದರು.

ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕವಿತಾ ಅವರು ಸಭೆಗೆ ಮಾಹಿತಿ ನೀಡಿ, ಪ್ರತಿ ವರ್ಷ ಭಾರತದಲ್ಲಿ ೨೫೦೦ ಜನರು ತಂಬಾಕು ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ. ವಿಶ್ವದ 10 ರಲ್ಲಿ 1 ಸಾವು ತಂಬಾಕಿನಿಂದ ಉಂಟಾಗುತ್ತದೆ. ಸುಮಾರು 6000 ಅಪಾಯಕಾರಿ ರಾಸಾಯನಿಕಗಳನ್ನು ತಂಬಾಕು ಪದಾರ್ಥಗಳು ಹೊಂದಿರುತ್ತದೆ. ಪ್ರತಿ ಸಿಗರೇಟ್/ಬೀಡಿ ಸೇವನೆ 7 ನಿಮಿಷ ಆಯಸ್ಸು ಮೊಟಕುಗೊಳಿಸುತ್ತಿದೆ (ವಿಶ್ವ ಆರೋಗ್ಯ ಸಂಸ್ಥೆ). ಪ್ರತಿ ವರ್ಷ ವಿಶ್ವದಾದ್ಯಂತ 60 ಲಕ್ಷಕ್ಕಿಂತ ಹೆಚ್ಚು ಜನರು ತಂಬಾಕು ಸೇವನೆಯಿಂದ ಉಂಟಾಗುವ ಖಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ.ಇವುಗಳ ಉತ್ಪನ್ನಗಳ ಸೇವನೆಯಿಂದ ಉಂಟಾಗುವ ಸಾವು ಮತ್ತು ಆರೋಗ್ಯ ಸಮಸ್ಯೆಗಳಿಂದ ರಾಜ್ಯದ ಹಾಗೂ ದೇಶದ ಅಭಿವೃದ್ಧಿ ಕುಂಠಿತವಾಗುವದು. ಆದರೆ ಇಂತಹ ತಂಬಾಕು ಪದಾರ್ಥಗಳನ್ನು ತ್ಯಜಿಸುವದರಿಂದ ತಂಬಾಕು ಸೇವನೆಯಿಂದ ಉಂಟಾಗುವ ಸಾವುಗಳನ್ನು ತಡೆಗಟ್ಟಬಹುದಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾಪಂಚಾಯತ್ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸುರೇಶ ಚವ್ಹಾಣ, ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕರಾದ ಮಹಾಂತೇಶ ಉಳ್ಳಾಗಡ್ಡಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ರಾಜೇಶ್ವರಿ ಗೊಲಗೇರಿ, ತಾಲೂಕಾ ಆರೋಗ್ಯಾಧಿಕಾರಿ ಪಿ.ಎ.ಹಿಟ್ನಳ್ಳಿ, ಇಂಡಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಅರ್ಚನಾ ಕುಲಕರ್ಣಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

