
ಸಿಂದಗಿ: ರಾಷ್ಟ್ರಕವಿ ಕುವೆಂಪು ವಿರಚಿತ ಹೆಮ್ಮೆಯ ನಾಡಗೀತೆ ‘ಜಯಭಾರತ ಜನನಿಯ ತನುಜಾತೆ’ಗೆ ಸಂಗೀತ ವಿದುಷಿ ಎಚ್.ಆರ್. ಲೀಲಾವತಿ ಅಧ್ಯಕ್ಷತೆಯ ಸಮಿತಿ ಶಿಫಾರಸು ಮಾಡಿದ ಪ್ರಕಾರ ಮೈಸೂರು ಅನಂತ ಸ್ವಾಮಿಯವರ ರಾಗ ಸಂಯೋಜನೆ ಮತ್ತು 2 ನಿಮಿಷ 3೦ಸೆಕೆಂಡ್‌ಗಳ ಕಾಲಾವಧಿಯನ್ನು ಅಂತಿಮಗೊಳಿಸಿದ ರಾಜ್ಯ ಸರ್ಕಾರದ ನಿರ್ಣಯವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ರಾಜಶೇಖರ ಕೂಚಬಾಳ ಸ್ವಾಗತಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಯನ್ನು ಪರಿಹರಿಸಿದ್ದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತದೆ. ಹಾವೇರಿಯಲ್ಲಿ ನಡೆಯುವ 86ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕಿಂತಲೂ ಮುಂಚೆ ಗೊಂದಲಕ್ಕೆ ಇತಿಶ್ರೀ ಹಾಡಬೇಕು ಎಂದು ಈ ಹಿಂದೆ ಸರಕಾರಕ್ಕೆ ಪರಿಷತ್ತಿನ ಮೂಲಕ ಒತ್ತಡ ಹೇರಲಾಗಿತ್ತು. ತದನಿಮಿತ್ಯ ಸರ್ಕಾರ ಒಳ್ಳೆಯ ನಿರ್ಣಯವನ್ನು ತೆಗೆದುಕೊಂಡಿದೆ ಎಂದು ತಾಲೂಕು ಕಸಾಪ ಅಧ್ಯಕ್ಷರು ಪದಾಧಿಕಾರಿಗಳು ಸರ್ಕಾರದ ಕಾರ್ಯವನ್ನು ಮೆಚ್ಚಿದ್ದಾರೆ.
