ಸಿಂದಗಿ : ಮೂರು ಎಕರೆ ಜಮೀನಿನ ತಾತ್ಕಾಲಿಕ ಪೋಡಿ ಮಾಡಿಕೊಡಲು ಲಂಚದ ಬೇಡಿಕೆ ಇಟ್ಟಿದ್ದ ಸಿಂದಗಿ ಎಡಿಎಲ್ ಕಚೇರಿ ಸರ್ವೇಯರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಮಂಗಳವಾರ ನಡೆದಿದೆ.
ಬಸವರಾಜ್ ಅಲಿಯಾಸ್ ಮಾಂತೇಶ್ ಮಾಡ್ಯಾಳ ಎಂಬುವರು ದೂರು ಸಲ್ಲಿಸಿ, ತಮ್ಮ ಸಂಬಂಧಿಕರಾದ ಶರಣಪ್ಪಾ ಮೇಲಿನಮನಿ ಇವರ ಆಲಮೇಲ ತಾಲೂಕಿನ ಹೂವಿನಹಳ್ಳಿ ಗ್ರಾಮದ 3 ಎಕರೆ ಜಮೀನಿನ ತಾತ್ಕಾಲಿಕ ಫೋಡಿ ಮಾಡಿಕೊಡಲು ಸರ್ವೇಯರ್ ಮುಂಗಡವಾಡಿ 18 ಸಾವಿರ ರೂ. ಪಡೆದುಕೊಂಡಿದ್ದರು. ಸದರಿ ಜಮೀನಿನ ಪೋಡಿ ಮಾಡಿ ಉತಾರಿಯಲ್ಲಿ ಹೆಸರುಗಳನ್ನು ಪ್ರತ್ಯೇಕಿಸಲು 10 ಸಾವಿರ ರೂ. ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೋಲಿಸ್ ಅಧಿಕಾರಿಗಳು ದಾಳಿ ನಡೆಸಿ ಆಪಾದಿತನನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆದಿದೆ.
ಕರ್ನಾಟಕ ಲೋಕಾಯುಕ್ತ ಪೋಲಿಸ್ ಅಧೀಕ್ಷಕರಾದ ಶ್ರೀಮತಿ ಅನಿತಾ ಅದ್ದನ್ನವರ ಅವರ ಮಾರ್ಗದರ್ಶನದಲ್ಲಿ ನಡೆದ ದಾಳಿ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಡಿವೈಎಸ್‌ಪಿ ಅರುಣ ನಾಯಕ್, ತನಿಖಾಧಿಕಾರಿಗಳಾದ ಆನಂದ ಟಕ್ಕಣ್ಣವರ್, ಪೋಲಿಸ್ ಇನ್ಸಪೆಕ್ಟರ್ ಆನಂದ ಡೋಣಿ, ಸೇರಿದಂತೆ ಇತರ ಸಿಬ್ಬಂದಿಗಳು ದಾಳಿಯಲ್ಲಿ ಭಾಗವಹಿಸಿದ್ದರು.
