
ವಿಜಯಪುರ : ರಾಜ್ಯ ಮಟ್ಟದ ಬಾಲಕ ಮತ್ತು ಬಾಲಕಿಯರ ಪದವಿಪೂರ್ವ ಕಾಲೇಜುಗಳ ಖೋ ಖೋ ಪಂದ್ಯಾವಳಿ ಇದೇ ಮೊದಲ ಬಾರಿಗೆ ವಿಜಯಪುರ ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಎಸ್.ಎಸ್.ಪದವಿಪೂರ್ವ ಕಾಲೇಜು ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನವೆಂಬರ 9 ಮತ್ತು 10 ರಂದು ಎರಡು ದಿನ ನಡೆಯಲಿದೆ ಎಂದು ಎಸ್.ಎಸ್.ಪಿ.ಯು.ಕಾಲೇಜಿನ ಆಡಳಿತಾಧಿಕಾರಿ ಆಯ್.ಎಸ್.ಕಾಳಪ್ಪನವರ ತಿಳಿಸಿದರು.
ವಿಜಯಪುರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ಅವರ ಆಸಕ್ತಿ ಮತ್ತು ಉತ್ಸಾಹದ ಫಲವಾಗಿ ಈ ಕ್ರೀಡಾಕೂಟ ಇದೇ ಮೊದಲ ಬಾರಿಗೆ ವಿಜಯಪುರ ಜಿಲ್ಲೆಗೆ ಸಿಕ್ಕಿದೆ. ಬಿ.ಎಲ್.ಡಿ.ಇ. ಮೆಡಿಕಲ್ ಕಾಲೇಜಿನ ಆವರಣದಲ್ಲಿರುವ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಈ ಪಂದ್ಯಾವಳಿ ಯಶಸ್ಸಿಗಾಗಿ ವಿವಿಧ 12 ಸಮಿತಿಗಳನ್ನು ರಚಿಸಲಾಗಿದೆ. ನವೆಂಬರ್ 9ರಂದು ನಡೆಯಲಿರುವ ಉದ್ಘಾಟನೆ ಸಮಾರಂಭದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎ.ಎಸ್.ಪಾಟೀಲ ನಡಹಳ್ಳಿ, ಎಂ.ಬಿ.ಪಾಟೀಲ, ಸಂಸದ ರಮೇಶ ಜಿಗಜಿಣಗಿ ವಿಧಾನ ಪರಿಷತ್ತ ಸದಸ್ಯರಾದ ಪ್ರಕಾಶ ರಾಠೋಡ, ಸುನೀಲಗೌಡ ಪಾಟೀಲ, ಪ್ರಕಾಶ ಹುಕ್ಕೇರಿ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಹೊನಲು ಬೆಳಕಿನ ಖೋ ಖೋ ಪಂದ್ಯಾವಳಿ ಇದಾಗಿದ್ದು, ಕ್ರೀಡಾಕೂಟಕ್ಕಾಗಿ 6 ಮೈದಾನಗಳನ್ನು ನಿರ್ಮಿಸಲಾಗಿದೆ. ಈ ಕ್ರೀಡಾಕೂಟದಲ್ಲಿ 32 ಶೈಕ್ಷಣಿಕ ಜಿಲ್ಲೆಗಳಿಂದ 32 ಬಾಲಕ ಮತ್ತು 32 ಬಾಲಕಿಯರ ತಂಡಗಳ 863 ಕ್ರೀಡಾಪಟುಗಳು ಹಾಗೂ 80 ತರಬೇತಿದಾರರು ವಿಜಯಪುರಕ್ಕೆ ಆಗಮಿಸುತ್ತಿದ್ದಾರೆ. ಕ್ರೀಡಾಪಟುಗಳು ಮತ್ತು ಸಿಬ್ಬಂದಿಗಾಗಿ ಬಿ.ಎಲ್.ಡಿ.ಇ. ಸಂಸ್ಥೆಯ ವತಿಯಿಂದ ಮೂರು ದಿನಗಳ ಕಾಲ ವಿಜಯಪುರ ಶೈಲಿಯ ರುಚಿಕಟ್ಟಾದ ಊಟದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ಕ್ರೀಡಾಕೂಟದ ಯಶಸ್ಸಿಗಾಗಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಅವರು ತಿಳಿಸಿದರು.

ವಿಜಯಪುರ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎನ್.ಬಗಲಿ ಮಾತನಾಡಿ ಈ ಕ್ರೀಡಾಕೂಟಕ್ಕಾಗಿ ಸರಕಾರದಿಂದ ರೂ.11.75 ಲಕ್ಷ ಅನುದಾನ ಬಂದಿದೆ. ಈ ಹಣವನ್ನು ಕ್ರೀಡಾಪಟುಗಳು ಸಿಬ್ಬಂದಿಯ ಟಿಎ ಮತ್ತು ಡಿಎಗಾಗಿ ವ್ಯಯಿಸಲಾಗುವುದು. ಇನ್ನೂ ರೂ. 1 ಲಕ್ಷ ಅನುದಾನದ ಅಗತ್ಯವಿದ್ದು ಸರಕಾರದಿಂದ ಈ ಹಣ ಪಡೆಯಲು ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಬಿ.ಎಲ್.ಡಿ.ಇ. ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಆರ್.ಬಿ.ಕೊಟ್ನಾಳ ಮಾತನಾಡಿ, ಕ್ರೀಡಾಕೂಟಕ್ಕೆ ಆಗಮಿಸುವ ಕ್ರೀಡಾಪಟುಗಳು ಮತ್ತು ತರಬೇತಿದಾರರಿಗೆ ವಿಜಯಪುರ ನಗರದ ೮ ನಾನಾ ಪಿ.ಯು.ಕಾಲೇಜುಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ನವೆಂಬರ್ 8 ರಿಂದಲೇ ಕ್ರೀಡಾಪಟುಗಳು ಮತ್ತು ತರಬೇತುದಾರರು ನಗರಕ್ಕೆ ಆಗಮಿಸಲಿದ್ದಾರೆ. ಇವರಿಗಾಗಿ ಫ.ಗು.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜ, ಎಸ್.ಬಿ. ಆಟ್ರ‍್ಸ್ ಮತ್ತು ಕೆಸಿಪಿ ಸಾಯನ್ಸ್ ಕಾಲೇಜ, ಬಿ.ಎಲ್.ಡಿ.ಇ. ನರ್ಸಿಂಗ್ ಕಾಲೇಜ, ರೂಪಾದೇವಿ ಪಿ.ಯು.ಕಾಲೇಜು, ಚೇತನಾ ಪಿ.ಯು.ಕಾಲೇಜು, ಚೈತನ್ಯಾ ಪಿ.ಯು. ಕಾಲೇಜು, ಎಕ್ಸಲೆಂಟ್ ಪಿ.ಯು.ಕಾಲೇಜು ಮತ್ತು ತುಂಗಳ ಸಾಯನ್ಸ್ ಪಿಯು ಕಾಲೇಜುಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣಗಳಿಂದ ಕ್ರೀಡಾಂಗಣಕ್ಕೆ ಆಗಮಿಸಲು ಬಸ್ಸಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಕ್ರೀಡಾ ನಿರ್ದೇಶಕ ಎಸ್.ಎಸ್.ಕೋರಿ, ಸಹಾಯಕ ನಿರ್ದೇಶಕ ಕೈಲಾಸ ಹಿರೇಮಠ, ಬಿ.ಎಲ್.ಡಿ.ಇ. ಸಂಸ್ಥೆಯ ಆಡಳಿತಾಧಿಕಾರಿ ಬಿ.ಆರ್.ಪಾಟೀಲ, ಎಸ್.ಎಸ್.ಪಿ.ಯು. ಕಾಲೇಜಿನ ಪ್ರಾಚಾರ್ಯ ಡಾ. ಜಿ.ಡಿ.ಅಕಮಂಚಿ ಉಪಸ್ಥಿತರಿದ್ದರು.

