ಸಾಧ್ವಿ ನಿರಂಜನ ಜ್ಯೋತಿ ಪ್ರಯಾಣಿಸುತ್ತಿದ್ದ ಕಾರು ವಿಜಯಪುರ ತಾಲೂಕಿನ ಜುಮನಾಳ ಬಳಿ ಅಪಘಾತಕ್ಕೀಡಾಗಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ.
ನಗರ ಹೊರವಲಯದ ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 50ರ ಜುಮನಾಳ ಬಳಿ ಎದುರಿನಿಂದ ಬರುತ್ತಿದ್ದ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆ ಕಡಿಮೆ ಇದ್ದ ಪರಿಣಾಮ ಈ ಘಟನೆಯಲ್ಲಿ ಕೇಂದ್ರ ಸಚಿವರಿಗೆ ಹಾಗೂ ಕಾರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಗೊಂಡ ಕೇಂದ್ರ ಸಚಿವೆ ಸಾದ್ವಿ ನಿರಂಜನಾ ಜ್ಯೋತಿ ಹಾಗೂ ಕಾರ್ ಚಾಲಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಸಾಧ್ವಿ ನಿರಂಜನ ಜ್ಯೋತಿ ಮಾತನಾಡಿ ಯಾವುದೇ ಭಯಪಡುವ ಅಗತ್ಯವಿಲ್ಲ ನಾನು ಹಾಗೂ ಡ್ರೈವರ್ ಕ್ಷೇಮವಾಗಿದ್ದೇವೆ ಎಂದು ಪತ್ರಿಕಾ ಮಾಧ್ಯಮದವರೊಂದಿಗೆ ಕೇಂದ್ರ ಸಚಿವೆ ಮಾತನಾಡಿದ್ದಾರೆ.
ಇತ್ತ ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಸಚಿವ ಗೋವಿಂದ ಕಾರಜೋಳ ಪುತ್ರ ಉಮೇಶ ಕಾರಜೋಳ ಸ್ಥಳಕ್ಕೆ ದೌಡಾಯಿಸಿದರು. ಅಲ್ಲದೆ ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸುವ ವೇಳೆಯು ಉಮೇಶ ಕಾರಜೋಳ ಇದ್ದರು. ಮಧ್ಯಾಹ್ನ ವಿಜಯಪುರ ನಗರದಲ್ಲಿ ನಡೆದ ನಾಗಠಾಣ ಕ್ಷೇತ್ರದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಸಾಧ್ವಿ ಅವರ ಜೊತೆಗೆ ಉಮೇಶ ಕಾರಜೋಳ, ಗೋಪಾಲ್ ಕಾರಜೋಳ ಸಹ ಪಾಲ್ಗೊಂಡಿದ್ದರು.
