ಸಿಂದಗಿ: ಸಿದ್ದರಾಮಯ್ಯ ಮತ್ತು ಗಾಂಧಿ ಕುಟುಂಬ ಮಾಡದ ಕಾರ್ಯವನ್ನು ಬಿಜೆಪಿ ಸರ್ಕಾರ ಮಾಡಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಟ್ಟಿದ್ದು ನಮ್ಮ ಧೀಮಂತ ನಾಯಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.
ನಗರದ ಮದಿನಾ ನಗರದಲ್ಲಿ ಶಿವಶರಣ ಹರಳಯ್ಯ ಸಮಗಾರ ಸಮುದಾಯ ಭವನದ ಭೂಮಿಪೂಜೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಿಸಲಾತಿ ಕುರಿತಂತೆ ಪರಿಶಿಷ್ಠ ಜಾತಿಗೆ ಶೇಕಡಾ ೧೫ ರಿಂದ 17 ವರೆಗೆ ಪರಿಶಿಷ್ಠ ಪಂಗಡಗಳಿಗೆ ಶೇ 3 ರಿಂದ 7 ರವರೆಗೆ ಮೀಸಲಾತಿಯನ್ನು ಏರಿಕೆ ಮಾಡಿದ್ದಾರೆ. ಇದಲ್ಲದೇ ಪರಿಶಿಷ್ಠ ಜಾತಿಯ ಬಹು ದಿನದ ಬೇಡಿಕೆಯಾದ ಒಳ ಮೀಸಲಾತಿಯನ್ನು ಜಾರಿಗೆ ತರುವ ಕಾರ್ಯ ಈಗಾಗಲೇ ನಡೆದಿದ್ದು 101 ಜಾತಿಗಳಿಗೆ ನ್ಯಾಯವನ್ನು ಒದಗಿಸುತ್ತೇವೆ. ಇನ್ನೂ ಕಾಂಗ್ರೆಸ್ ಪಕ್ಷಕ್ಕೆ ದೇಶದಲ್ಲಿ ಉಳಿಗಾಲವಿಲ್ಲ. ಕಾಂಗ್ರೆಸ್‌ನ ಅಪಪ್ರಚಾರದ ಮೂಲಕ ಹುನ್ನಾರ ನಡೆಸುತ್ತಿದೆ, ಕಾಂಗ್ರೆಸ್‌ನ ಷಡ್ಯಂತ್ರದ ಮಾತುಗಳಿಗೆ ಕಿವಿ ಕೊಡದೇ ನಿಮ್ಮ ಬೇಡಿಕೆಗೆ ನ್ಯಾಯುತವಾದ ಹೋರಾಟ ನಡೆಸಿ ಎಂದು ಹೇಳಿದರು.
ಈ ವೇಳೆ ಶಾಸಕ ರಮೇಶ ಭೂಸನೂರ ಮಾತನಾಡಿ, ಉಪ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಇಂದು ಸಿಂದಗಿ ಮತಕ್ಷೇತ್ರ ಅಭಿವೃದ್ದಿಯ ಪಥದಲ್ಲಿ ಸಾಗುತ್ತಿದೆ. ಬಹು ದಿನದ ಬೇಡಿಕೆಗಳು ಈಡೇರಿಸುತ್ತಿದ್ದೇವೆ. ನಮ್ಮದು ಸಂಬವಿಧಾನ ವಿರೋಧಿ ಸರ್ಕಾರವಲ್ಲ ನಮ್ಮದು ಸಂವಿಧಾನ ಪರವಾದ ಸರ್ಕಾರ ಎಂದು ಹೇಳಿದರು.
ಶಿವಶರಣ ಹರಳಯ್ಯ ಸಮಾಜದ ತಾಲೂಕಾ ಅಧ್ಯಕ್ಷ ಸತೀಶ ಮನಗೂಳಿ, ಯುವ ಅಧ್ಯಕ್ಷ ಅನೀಲ ಮಗರುಮಖಾನ, ಕಾಜು ಬಂಕಲಗಿ, ಸಾಯಬಣ್ಣ ಪುರದಾಳ, ಸದಾ ಕಬಾಡೆ, ಆನಂದ ತೇರದಾಳ, ಗುರುಪಾದ ಮನಗೂಳಿ, ಯಲ್ಲಪ್ಪ ಶಿಂದೆ ಹಾಗೂ ಸಮಾಜದ ಮುಖಂಡರು ಸಚಿವರಿಗೆ ಹಾಗೂ ಶಾಸಕರಿಗೆ ಸನ್ಮಾನಿಸಿ ಸಂತಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಲಿಂಬೆ ಅಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಸಿದ್ದನಗೌಡ ಹೂವಿನಹಳ್ಳಿ, ಪುರಸಭೆ ಮುಖ್ಯಾಧಿಕಾರಿ ರಾಜಶ್ರೀ ತುಂಗಳ, ಪುರಸಭೆ ಉಪಾಧ್ಯಕ್ಷ ಹಾಸೀಂಪೀರ ಆಳಂದ, ರಾಜಕುಮಾರ ಭಾಸಗಿ, ಎಸ್.ಸಿ ಮೋರ್ಚಾ ಅಧ್ಯಕ್ಷ ಸಿದ್ದು ಪೂಜಾರಿ, ಪ್ರಕಾಶ ನಂದಿಕೋಲ, ಯಲ್ಲೂ ಇಂಗಳಗಿ, ಪುರಸಭೆ ಸದಸ್ಯ ಬಾಷಾಸಾಬ ತಾಂಬೂಳಿ, ಕ.ಸಾ.ಪ ಅಧ್ಯಕ್ಷ ರಾಜಶೇಖರ ಕೊಚಬಾಳ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
