ಸಿಂದಗಿ : ಪಟ್ಟಣದ ಊರನ ಹಿರೇಮಠದ ಹತ್ತಿರವಿರುವ ಚಾಮುಂಡೇಶ್ವರಿ ಜ್ಯುವೆಲ್ಲರ್ಸ್ ಅಂಗಡಿಯ ಬಳಿ ಇಂದು ಸಂಜೆ ೭ಗಂಟೆಯ ವೇಳೆಗೆ ನಂಬರ್ ಪ್ಲೇಟ್ ಇಲ್ಲದ ಎರಡು ಬೈಕ್ ಮೇಲೆ ಬಂದ 5 ಜನ ದುಷ್ಕರ್ಮಿಗಳಲ್ಲಿ ಓರ್ವ ಗಾಳಿಯಲ್ಲಿ ಗುಂಡು ಹಾರಿಸಿ ಭಯದ ವಾತಾವರಣ ಸೃಷ್ಟಿಸಿದ ಘಟನೆ ನಡೆದಿದೆ.
ಅಂಗಡಿಯ ಮುಂದೆ ಗಾಳಿಯಲ್ಲಿ ಗುಂಡು ಹಾರಿಸಿದ ಕೂಡಲೇ ಅಲ್ಲಿನ ಜನ ಜಾಮಾಯಿಸಿ ಅವರನ್ನು ಹಿಡಿಯಲು ಹೋದಾಗ ದುಷ್ಕರ್ಮಿಗಳು ತಮ್ಮ ಬ್ಯಾಗಿನಲ್ಲಿ ಇದ್ದ ಮಚ್ಚನ್ನು ತೋರಿಸಿ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ. ಇಷ್ಟಾದರೂ ಬಿಡದ ಸ್ಥಳೀಯರು ಐದು ಜನರಲ್ಲಿ ಇಬ್ಬರು ವ್ಯಕ್ತಿಗಳನ್ನು ಮೋರಟಗಿ ನಾಕಾದ ಸೇದು ಬಾವಿಯ ಬಳಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರು ವ್ಯಕ್ತಿಗಳ ಸಹಿತ 1 ನಾಡ ಬಂದೂಕು , 2 ಮಚ್ಚು 2 ಜೀವಂತ ಗುಂಡು, 2ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಸೆರೆ ಸಿಕ್ಕವರು ಮಹಾರಾಷ್ಟ್ರ ಮೂಲದವರು ಎಂಬ ಶಂಕೆ ಮೂಡಿಬಂದಿದೆ ಪೊಲೀಸರ ತನಿಖೆ ನಡೆಸುತ್ತಿದ್ದಾರೆ.