ನಿಧನ ಹೊಂದಿದ ವ್ಯಕ್ತಿಗಳ ಪಾರ್ಮ ತುಂಬಿ ಕೊಡದಂತೆ ಸಾರ್ವಜನಿಕರಲ್ಲಿ ಆಹಾರ ಮತ್ತು ಸರಬರಾಜು ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ ಮನವಿ ಮಾಡಿಕೊಂಡರು.
ಸಿಂದಗಿ: ಪಟ್ಟಣದ ಪ್ರಜಾಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಸಿಂದಗಿ ಮತಕ್ಷೇತ್ರದಲ್ಲಿ ಒಟ್ಟು 2,50,689 ಮತದಾರರು ಇದ್ದು, ಇದುವರೆಗೆ 2,33,000 ಮತದಾರರ ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದ್ದು, 93.5% ಪ್ರಗತಿ ಸಾಧಿಸಲಾಗಿದೆ. ಉಳಿದ ಸುಮಾರು 17 ಸಾವಿರ ಮತದಾರರ ಮ್ಯಾಪಿಂಗ್ ಕಾರ್ಯ ಬಾಕಿಯಿದೆ ಎಂದರು.
2026ರ ಜೂನ್ 30ರಿಂದ ಜುಲೈ 29ರವರೆಗೆ BLO ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯ ಮಾಹಿತಿಯನ್ನು ನಿಗದಿತ ನಮೂನೆಯ ಮೂಲಕ ಸಂಗ್ರಹಿಸಿ ಚುನಾವಣಾ ಆಯೋಗಕ್ಕೆ ಸಲ್ಲಿಸಲಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ರಾಜಕೀಯ ಪಕ್ಷಗಳು ಈಗಾಗಲೇ BLA (Booth Level Agent)ಗಳ ಪಟ್ಟಿಯನ್ನು ಸಲ್ಲಿಸಿದ್ದು, BLO ಗಳೊಂದಿಗೆ ಕಾರ್ಯದಲ್ಲಿ ಭಾಗವಹಿಸಲು ಭಾರತ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಅಧಿಕಾರಿಗಳು ನೀಡಿದ ಮಾಹಿತಿಯಂತೆ, ಕರಡು ಮತದಾರರ ಪಟ್ಟಿಯನ್ನು 2026 ರ ಆಗಸ್ಟ್ 5 ರಂದು ಪ್ರಕಟಿಸಲಾಗುವುದು. ಕರಡು ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಹಾಗೂ ಅರ್ಜಿಗಳನ್ನು ಸಲ್ಲಿಸಲು ಆಗಸ್ಟ್ 5 ರಿಂದ ಸೆಪ್ಟೆಂಬರ್ 3 ರ ವರೆಗೆ ಅವಕಾಶ ನೀಡಲಾಗಿದೆ.
ಸ್ವೀಕರಿಸಲಾದ ಆಕ್ಷೇಪಣೆಗಳ ಪರಿಶೀಲನೆ ಹಾಗೂ ನೋಟಿಸ್ ಪ್ರಕ್ರಿಯೆಯನ್ನು ಅಕ್ಟೋಬರ್ 3 ರ ವರೆಗೆ ಪೂರ್ಣಗೊಳಿಸಿ, ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 7, 2026 ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದರು.ಇದೇ ವೇಳೆ, ನಿಧನ ಹೊಂದಿದ ವ್ಯಕ್ತಿಗಳ ಹೆಸರಿನಲ್ಲಿ ಯಾವುದೇ ನಮೂನೆಗಳನ್ನು ಭರ್ತಿ ಮಾಡಬಾರದು. ಅಂತಹ ಪ್ರಕರಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ತಾಲೂಕು ದಂಡಾಧಿಕಾರಿ ಕರೇಪ್ಪ ಬೇಳ್ಳಿ ಉಪಸ್ಥಿತರಿದ್ದರು.
