
ವಿಜಯಪುರ : ಉಜನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗಿದೆ. ಇದರಿಂದಾಗಿ ಮುನ್ನಚ್ಚರಿಕೆಯ ಕ್ರಮ ವಹಿಸಲು, ಪ್ರವಾಹ ಭೀತಿ ಎದುರಿಸಲಿರುವ ಭೀಮಾ ನದಿಪಾತ್ರದ ಗ್ರಾಮಗಳಿಗೆ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಸೆ.17ರಂದು ಭೇಟಿ ನೀಡಿ, ಆಯಾ ಗ್ರಾಮಸ್ಥರಿಗೆ ತಿಳಿವಳಿಕೆ ಮೂಡಿಸಿದರು.
ಮೊದಲಿಗೆ ಧೂಳಖೇಡ ಬ್ರಿಡ್ಜ್ಗೆ ತೆರಳಿ ವೀಕ್ಷಣೆ ನಡೆಸಿದರು. ಬಳಿಕ ಚಣೆಗಾಂವ್ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಸಹ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಉಜನಿ ಜಲಾಶಯದಿಂದ 91 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಮತ್ತು ಭೀಮಾ ನದಿಯ ಉಪ ನದಿಗಳಿಂದ 40 ಸಾವಿರ ಕ್ಯೂಸೆಕ್ ನೀರು ಸೇರಿ ಒಟ್ಟು 1,31 ಲಕ್ಷ ಕ್ಯೂಸೆಕ್ ನೀರು ಕರ್ನಾಟಕ ರಾಜ್ಯಕ್ಕೆ ಪ್ರವೇಶ ಮಾಡಲಿದೆ. ದೊಡ್ಡ ಪ್ರಮಾಣದಲ್ಲಿ ನೀರು ಭೀಮಾ ನದಿಗೆ ಹರಿದು ಬರುವುದರಿಂದ ನದಿ ಪಾತ್ರದುದ್ದಕ್ಕೂ ಬರುವ ಎಲ್ಲ ಗ್ರಾಮಸ್ಥರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ನದಿ ಹತ್ತಿರ ಹೋಗಬಾರದು. ಜಾನುವಾರುಗಳನ್ನು ನದಿಗೆ ಬಿಡಬಾರದು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಭೀಮಾ ನದಿಗೆ ವ್ಯಾಪಕ ಪ್ರಮಾಣದಲ್ಲಿ ನೀರು ಹರಿದು ಬರುವುದರಿಂದ ಹೊಳೆ ದಂಡೆಯ ಜನರು ಭೀತಿಗೊಳಗಾಗದೇ, ಮುನ್ನೆಚ್ಚರಿಕೆ ವಹಿಸಬೇಕು. ಅಡವಿ ವಸತಿ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಮನವಿ ಮಾಡಿದರು.

ಹಿಂಗಣಿಗೂ ಭೇಟಿ: ಭೀಮಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜನರಲ್ಲಿ ಜಾಗೃತಿ ಮೂಡಿಸಲು ನದಿತಟದ ಗ್ರಾಮಗಳಲ್ಲಿ ಸಂಚಾರ ಕೈಗೊಂಡ ವೇಳೆ ಜಿಲ್ಲಾಧಿಕಾರಿಗಳು, ಇಂಡಿ ತಾಲೂಕಿನ ಹಿಂಗಣಿ ಗ್ರಾಮಕ್ಕು ಸಹ ಭೇಟಿ ನೀಡಿದರು. ಆ ಗ್ರಾಮಸ್ಥರೊಂದಿಗೆ ಮಾತನಾಡಿ ಎಚ್ಚರಿಕೆ ವಹಿಸಲು ಸಲಹೆ ಮಾಡಿದರು.
ಈ ವೇಳೆ ಇಂಡಿ ಉಪ ವಿಭಾಗದ ಸಹಾಯಕ ಆಯುಕ್ತರಾದ ರಾಮಚಂದ್ರ ಗಡಾದೆ, ಚಡಚಣ ತಹಸೀಲ್ದಾರರಾದ ಹೆಚ್.ಎನ್.ಶಿರಹಟ್ಟಿ ಹಾಗೂ ಇನ್ನೀತರ ಅಧಿಕಾರಿಗಳು ಉಪಸ್ಥಿತರಿದ್ದರು.
