ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸುಗುವ ಕಾಮುಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಹಿಳಾ ಜಾಗರಣ ವೇದಿಕೆ ಸಿಂದಗಿ ವತಿಯಿಂದ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ.
ಸಿಂದಗಿ : ಕಾಮುಕರನ್ನು ಸಾರ್ವಜನಿಕರ ವಶಕ್ಕೆ ನೀಡಿ ಕಾಮುಕರು ಮತ್ತೊಮ್ಮೆ ಹೆಣ್ಣು ಮಕ್ಕಳನ್ನು ಕಣ್ಣೆತ್ತಿ ನೋಡದಂತಹ ಶಿಕ್ಷೆ ನೀಡುತ್ತಾರೆ ಎಂದು ಸಾಮಾಜಿಕ ಹೋರಾಟಗಾರ್ತಿ ಶೈಲಜಾ ಸ್ಥಾವರಮಠ ಹೇಳಿದರು .
ಪಟ್ಟಣದ ಆಡಳಿತ ಸೌಧದಲ್ಲಿ ಸೋಮವಾರದಂದು ಮಹಿಳಾ ಜಾಗರಣ ವೇದಿಕೆ ಸಿಂದಗಿ ವತಿಯಿಂದ ಮಹಿಳೆಯರ ಮೇಲಿನ ಅತ್ಯಾಚಾರ ದೌರ್ಜನ್ಯವನ್ನು ಖಂಡಿಸಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಇಂದಿನ ದಿನಮಾನದಲ್ಲಿ ಮಹಿಳೆಯರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲಾಗಿ ಮೆರಸಿದ್ದು ಇದಕ್ಕೆ ಸಾಕ್ಷಿಕರಣ ನೀಡಿದೆ. ರಾಜ್ಯದಲ್ಲಿಯೂ ಕೂಡ ದಿನನಿತ್ಯ ಇಂತಹ ಅಮಾನವೀಯ ಹೇಯ ಕೃತ್ಯಗಳು ಸರಣಿಯಾಗಿ ನಡೆಯುತ್ತಿವೆ. ಕಾರಣ ರಾಜ್ಯ ಸರ್ಕಾರ ಕೂಡಲೇ ಇಂತಹ ಕಾಮುಕರ ವಿರುದ್ಧ ಕಠಿಣ ಕಾನೂನು ಜಾರಿಗೆ ಮಾಡಬೇಕು. ಹಳ್ಳಿಯಿಂದ ದಿಲ್ಲಿಯವರೆಗೆ ಮಹಿಳೆಯರ ಮೇಲೆ , ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಲೇ ಬರುತ್ತಿದ್ದು ಅಪರಾಧಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ಕಲ್ಲಿನಿಂದ ಹೊಡೆದು ಸಾಯಿಸಬೇಕು ಇಂತಹ ಕಾನೂನು ಜಾರಿಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಶ್ಯಾಮಲಾ ಮಂದೆವಾಲಿ ಪುರುಷರ ಮೇಲಿನ ನಂಬಿಕೆಯೇ ಹೋಗಿದೆ, ಹೆಣ್ಣಿನಿಂದ ಜನ್ಮ ತಾಳಿದವ ಮೃಗೀಯ ರೀತಿಯಲ್ಲಿ ವರ್ತಿಸುತ್ತಿರುವುದರಿಂದ ಸಮಾಜದ ಸ್ವಾಸ್ತ್ಯ ಹಾಳಾಗುತ್ತಿದೆ. ಹೆಣ್ಣು ಮಕ್ಕಳು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ವಿಕೃತ ಕಾಮಿಗಳನ್ನು ನಡು ರಸ್ತೆಯಲ್ಲಿ ಬೆಂಕಿ ಹಚ್ಚಿ ಸುಟ್ಟು ಹಾಕಬೇಕು ಎಂದು ಹೇಳಿದರು.
ಮಹಾದೇವಿ ಅಂಬಲಿ, ಅನುಸೂಯ ಪಾರಗೊಂಡ , ಮಹಾನಂದ ಬಮ್ಮಣ್ಣಿ, ಸುನಂದಾ ಯಂಪೂರೆ ಮಾತನಾಡಿದರು.
ಈ ವೇಳೆ ಶರಣಮ್ಮ ನಾಯಕ , ಸಭಿಯಾ ಬೇಗಂ , ಸುನಂದಾ ಭಜಂತ್ರಿ , ಶಶಿಕಲಾ ಅಂಗಂಡಿ ಮತ್ತು ವಿವಿಧ ಸಂಘಗಳ ಮಹಿಳೆಯರು ಇದ್ದರು.
