
ವಿಜಯಪುರ: ಅಪರೇಶನ್ ವಿಜಯ ಕಾರ್ಗಿಲ್ ಟೊಲೊಲಿಂಗ್ ಯುದ್ದದಲ್ಲಿ ತಮ್ಮ ಅಸಾಧಾರಣ ಸಾಹಸ ಮೆರೆದು ವಿಜಯಕ್ಕೆ ನಾಂದಿ ಹಾಡಿದ “ವೀರಚಕ್ರ” ಪ್ರಶಸ್ತಿ ವಿಜೇತ ಕರ್ನಲ್ ದಿ.ಎಮ್.ಬಿ.ರವೀಂದ್ರನಾಥ ಅವರ ಪ್ರತಿಮೆಯನ್ನು ದಿ.೦೧ ರಂದು ಮಂಗಳವಾರ ವಿಜಯಪುರ ಸೈನಿಕ ಶಾಲೆಯಲ್ಲಿ ಪ್ರತಿಷ್ಠಾಪಿಸಿ ಅನಾವರಣ ಗೊಳಿಸಲಾಗುವುದು.
ವಿಜಯಪುರ ಸೈನಿಕ ಶಾಲೆಯ ೧೯೬೯ ರಿಂದ ೧೯೭೬ರ ಬ್ಯಾಚಿನ ಹಳೇ ವಿದ್ಯಾರ್ಥಿಗಳು ಸೇರಿ ಅವರ ಸಹಪಾಠಿಯಾದ ಕರ್ನಲ್ ಎಮ್.ಬಿ.ರವೀಂದ್ರನಾಥ ರವರ ಪುತ್ಥಳಿಯನ್ನು ಪ್ರತಿಷ್ಠಾಪಿಸಿ ಸಹಪಾಠಿಯನ್ನು ಸ್ಮರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕರ್ನಲ್ ದಿ.ಎಮ್.ಬಿ.ರವೀಂದ್ರನಾಥ ಅವರ ಪತ್ನಿ ಶ್ರೀಮತಿ ಅನಿತಾ ರವೀಂದ್ರನಾಥ ಹಾಗೂ ವಿಜಯಪುರ ಸೈನಿಕ ಶಾಲೆಯ ಪ್ರಾಚಾರ್ಯ ಗ್ರುಪ್ ಕ್ಯಾಪ್ಟನ್ ಪ್ರತಿಭಾ ಬಿಷ್ಠ, ಸ್ಕಾö್ಯಡ್ರನ್ ಲೀಡರ್ ಆಕಾಶ ವತ್ಸ ಆಡಮ್ ಆಫೀಸರ್ ಹಾಗೂ ನಿವೃತ್ತ ಬ್ರಿಗೇಡಿಯರ್ ಎಸ್.ಬಿ.ಸಜ್ಜನ, ಬಾಗಲಕೋಟ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಮೋಹನ ನಾಡಗೌಡ, ವಿಜಯಪುರದ ರಾಜಶೇಖರ ಚಪ್ಪಳಗಾಂವ, ಸತೀಶ ಮಾನೆಶಿಂಧೆ, ಡಾ.ಸುನೀಲ ಬಾದೋರ್ಗೆ, ಪ್ರಕಾಶ ದೇವ, ಎಚ್.ವಿ ವಿಶೋ, ಕ್ಯಾಪ್ಟನ್ ಆಯನ್ನಾ, ವಿರುಪಾಕ್ಷ ಹವಾಲ್ದಾರ, ಮಲ್ಲಿಕಾರ್ಜುನ ಗಾಣಗಿ, ಶರತ ಖರಾಡೆ, ಶ್ರೀಮತಿ ಬೆಟ್ಟಿ ಪ್ರಾನ್ಸಿಸ್, ಸಂಗಣ್ಣಾ ಅಸೋಟಿ, ಡಾ. ಶಿವಾನಂದ ಉಲ್ಲಾಸಕರ ಇವರ ಉಪಸ್ಥಿತಿಯಲ್ಲಿ ಮೂರ್ತಿಯನ್ನು ಅನಾವರಣಗೊಳಿಸಲಿದ್ದಾರೆ. ಹಾಗೂ ಗಣ್ಯರು, ಸೈನಿಕ ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿರುವವರು.
ಕಿರು ಪರಿಚಯ: ಕರ್ನಲ್ ಎಮ್.ಬಿ.ರವೀಂದ್ರನಾಥ ಅವರು ದಿ.೧೫ ಮೇ ೧೯೫೯ ರಲ್ಲಿ ಡಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾಗೋಡ ಹಳ್ಳಿಯಲ್ಲಿ ಜನಿಸಿದರು.೧೯೬೯ ರಲ್ಲಿ ವಿಜಯಪುರದಲ್ಲಿರುವ ಸೈನಿಕ ಶಾಲೆಗೆ ಸೇರಿದರು. ನಂತರ ೫೬ ನೇ ಅವಧಿಯಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಖಡಕವಾಸ್ಲಾದಲ್ಲಿ ಸೇರಿಕೊಂಡರು.೧೯೮೦ ರಲ್ಲಿ ಎಮ್.ಬಿ.ರವೀಂದ್ರನಾಥ ಅವರನ್ನು ಡೆಹರಾಡೂನ್‌ದ ಮಿಲಿಟೆರಿ ಅಕಾಡೆಮಿಗೆ ನಿಯೋಜಿಸಲಾಯಿತು. ೧೯೯೮ ರಲ್ಲಿ ರಜಪೂತನಾ ರಾಯಫಲ್ಸ್ದ ಎರಡನೇಯ ಬೆಟಾಲಿಯನ್‌ಗೆ ಕಮಾಂಡರ ಆಗಿ ನಿಯುಕ್ತಿಗೊಂಡರು.
ಕಾರ್ಗಿಲ್ ಯುದ್ಧದಲ್ಲಿ ಎಮ್.ಬಿ.ರವೀಂದ್ರನಾಥ ಅವರ ಬೆಟಾಲಿಯನ್‌ಗೆ ಟೊಲೊಲಿಂಗ್ ಪಾಯಿಂಟ್ ೪೫೯೦ ಹಾಗೂ ಕಾರ್ಗಿಲ್ ದ್ರಾಸ ಸೆಕ್ಟರ್ ಪ್ರದೇಶದಲ್ಲಿ ಮುಂದಾಳತ್ವ ವಹಿಸಿಕೊಂಡು ಕ್ರಿಯಾತ್ಮಕ ಕಾರ್ಯ ಹಾಗೂ ಶೌರ್ಯದಿಂದ ಹೋರಾಡಿ ಟೊಲೊಲಿಂಗ್ ಪಾಯಿಂಟನ್ನು ವಶಪಡಿಸಿಕೊಂಡಿದ್ದರು. ಈ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನಾ ಪಡೆಯಲ್ಲಿ ಪಡೆದುಕೊಂಡ ಮೊದಲ ವಿಜಯ ಇದಾಗಿತ್ತು.
ಭಾರತ ಸರ್ಕಾರವು ಕರ್ನಲ್ ದಿ.ಎಮ್.ಬಿ.ರವೀಂದ್ರನಾಥ ಅವರ ಅಸಾಧಾರಣ ನಾಯಕತ್ವ, ಧೈರ್ಯ, ಶೌರ್ಯ, ಸಾಹಸವನ್ನು ಮೆಚ್ಚಿ ದೇಶದ ಮೂರನೇ ಅತ್ಯುನ್ನತ ಪ್ರಶಸ್ತಿಯಾದ “ವೀರಚಕ್ರ” ಪ್ರಶಸ್ತಿಯನ್ನು ನೀಡಲಾಯಿತು.

