ಸಿಂದಗಿ : ಉತ್ತಮ ಸಾಹಿತಿ ಮತ್ತು ಕಥೆಗಾರ ಡಾ.ಚನ್ನಪ್ಪ ಕಟ್ಟಿ ಅವರ ಕಥೆಯಾಧಾರಿತ ಕಿರುಚಿತ್ರ ಊರ್ಧ್ವರೇತ ಒಂದು ಕಲಾತ್ಮಕ ಚಿತ್ರವಾಗಿದೆ ಎಂದು ಪ್ರೆಸ್‌ಕ್ಲಬ್ ಅಧ್ಯಕ್ಷ ಪ್ರೊ.ಶಾಂತೂ ಹಿರೇಮಠ ಹೇಳಿದರು.
ಸೋಮವಾರ ಪಟ್ಟಣದ ಸಂಗಮೇಶ್ವರ ವಿದ್ಯಾಲಯದಲ್ಲಿ ಊರ್ಧ್ವರೇತ ಚಿತ್ರದ ಕಥೆಗೆ ಉತ್ತರ ಕರ್ನಾಟಕ ಅಂತರಾಷ್ಟ್ರೀಯ ಕಿರು ಚಲನಚಿತ್ರೋತ್ಸವದಲ್ಲಿ 2022ನೇ ಸಾಲಿನ ಅತ್ಯುತ್ತಮ ಟೆಲೆ ಚಿತ್ರ ಕಥೆ ಅವಾರ್ಡ್ ದೊರೆತ ಹಿನ್ನಲೆ ಪತ್ರಕರ್ತರ ಬಳಗ ಹಾಗೂ ವಿದ್ಯಾಲಯದ ಬೋಧಕ ವೃಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೆಲೆ ಪ್ರಕಾಶನದ ನಿರ್ಮಾಣದಲ್ಲಿ ಮೂಡಿಬಂದ ಮೊದಲ ಕಿರುಚಿತ್ರ ಅತ್ತ್ಯುತ್ತಮವಾದ ಫಲಿತಾಂಶ ನೀಡಿದೆ. ಉತ್ತಮ ಕಥೆಯನ್ನು ಕಟ್ಟಿಕೊಟ್ಟ ಡಾ.ಚನ್ನಪ್ಪ ಕಟ್ಟಿ ಅವರ ಕಲಾತ್ಮಕವಾದ ಕಥೆಗಳನ್ನು ಬರೆಯುತ್ತಾರೆ. ಅವರ ಕಥೆಯೊಂದು ಟೆಲೆಚಿತ್ರವಾಗಿ ಒಂದನೇ ಹೆಜ್ಜೆಯಲ್ಲಿಯೇ ಅಮೋಘ ಯಶಸ್ಸನ್ನು ಕಂಡಿದೆ. ಅವರ ಕೆಲಸಗಳು ಅಕಾಡೆಮಿಕ್ ಆಗಿರುತ್ತವೆ. ಮುಂದಿನ ದಿನಗಳಲ್ಲಿ ಮೂರು ತಾಸಿನ ಕಲಾತ್ಮಕ ಸಿನಿಮಾವನ್ನು ರಚಿಸಲಿ ಎಂದು ಶುಭಹಾರೈಸಿದರು.
ಗೌರವ ಸನ್ಮಾನದ ಮೂಲಕ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಚನ್ನಪ್ಪ ಕಟ್ಟಿ, ಇದೊಂದು ಕ್ಲಿಷ್ಟಕರವಾದ ಮತ್ತು ಸಂಕೀರ್ಣವಾದ ಭಿನ್ನತೆ ಹೊಂದಿರುವ ಚಿತ್ರವಾಗಿದೆ. ಊರ್ಧ್ವರೇತ ಎಂಬ ಪದ ಮೇಲ್ಮುಖದ(ಎತ್ತರಕ್ಕೇರುವ) ಪಾರಿಭಾಷಿಕ ಪದವಾಗಿದೆ. ಈ ಚಿತ್ರದಲ್ಲಿ ನಾಲ್ಕು ಪಾತ್ರಗಳನ್ನು ಅತ್ಯಂತ ಗುರುತೆತೆಗೆ ತರುವ ಮ್ಯಾನರೀಸಂ ಮೂಲಕ ರೂಪಿಸಲಾಗಿದೆ. ಮೂರೇ ದಿನಗಳಲ್ಲಿ ನಿರ್ಮಾಣವಾದ ಈ ಚಿತ್ರದಲ್ಲಿ ವ್ಯಕ್ತಿಯೊಬ್ಬನ ಬಾಲ್ಯದ ಆಸಕ್ತಿ, ಮೊದಲ ಯತ್ನ, ಬೆಳೆದು ನಿಲ್ಲುವ ರೀತಿಯ ನಾಲ್ಕು ಹಂತಗಳನ್ನು ಚಿತ್ರದಲ್ಲಿ ಕಾಣಬಹುದಾಗಿದೆ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ, ಡಾ.ಲಿಂಗಣ್ಣ ಕಲಬುರ್ಗಿ, ಪತ್ರಕರ್ತ ರಮೇಶ ಪೂಜಾರ, ಗುರುನಾಥ ಅರಳಗುಂಡಗಿ, ಪತ್ರಕರ್ತ ಸಂಗಮೇಶ ಡಿಗ್ಗಿ, ಸುದರ್ಶನ ಜಂಗಣ್ಣಿ, ಗುರುರಾಜ ಮಠ, ಶಾಂತವೀರ ಹಿರೇಮಠ, ವಿಶ್ವಪ್ರಕಾಶ ಮಲಗೊಂಡ, ಮನೋಜಕುಮಾರ ಬಳ್ಳಾರಿ ಸೇರಿದಂತೆ ಮತ್ತಿತರರಿದ್ದರು.
