ಚುನಾವಣಾ ವೆಚ್ಚದ ಲೆಕ್ಕಪತ್ರ ಸಲ್ಲಿಸಲು ವಿಫಲ: ಮೂವರು ಮಾಜಿ ಅಭ್ಯರ್ಥಿಗಳು 3 ವರ್ಷ ಅನರ್ಹ
ಅಥಣಿ: 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ, ನಿಗದಿತ ಚುನಾವಣಾ ವೆಚ್ಚದ ಲೆಕ್ಕಪತ್ರಗಳನ್ನು ಸಲ್ಲಿಸಲು ವಿಫಲರಾದ ಬೆಳಗಾವಿ ಜಿಲ್ಲೆಯ ಮೂವರು ಅಭ್ಯರ್ಥಿಗಳನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಅನರ್ಹಗೊಳಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
2023ರ ಏಪ್ರಿಲ್ 13ರಂದು ನಡೆದಿದ್ದ ಅಥಣಿ-03 ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾಜಿ ಪೊಲೀಸ್ ಅಧಿಕಾರಿ ಬಸವರಾಜ ಬಿಸನಕೊಪ್ಪ ಹಾಗೂ ಶಶಿಕಾಂತ ಪಡಸಲಗಿ ಅವರು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕಾದ ಚುನಾವಣಾ ವೆಚ್ಚದ ಲೆಕ್ಕಪತ್ರಗಳನ್ನು ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ತಿಳಿಸಲಾಗಿದೆ.
ಇದೇ ಕಾರಣಕ್ಕೆ ಬೆಳಗಾವಿ ಜಿಲ್ಲೆಯ ಖಾನಾಪುರ-14 ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಮೇಶ ಭೀಮಪ್ಪ ಮಣ್ಣುದ್ದರ್ ಅವರನ್ನೂ ಅನರ್ಹಗೊಳಿಸಲಾಗಿದೆ.
ಚುನಾವಣಾ ಆಯೋಗದ ಆದೇಶದ ಪ್ರಕಾರ, ಈ ಮೂವರು ಮುಂದಿನ ಮೂರು ವರ್ಷಗಳ ಅವಧಿಗೆ ಸಂಸತ್ತಿನ ಉಭಯ ಸದನಗಳು, ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳು ಹಾಗೂ ವಿಧಾನ ಪರಿಷತ್‌ಗಳ ಸದಸ್ಯರಾಗಿ ಚುನಾಯಿತರಾಗಲು ಮತ್ತು ಸದಸ್ಯರಾಗಿರಲು ಅನರ್ಹರಾಗಿರುತ್ತಾರೆ.
ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾ ವೆಚ್ಚದ ಲೆಕ್ಕಪತ್ರಗಳನ್ನು ನಿಗದಿತ ನಿಯಮಗಳಂತೆ ಸಲ್ಲಿಸುವುದು ಕಡ್ಡಾಯವಾಗಿದ್ದು, ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
