
ಸಿಂದಗಿ: ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪಿ.ಇ.ಎಸ್ ಕಾಲೇಜು ಹಾಗೂ ತಾಲೂಕಾ ಆರೋಗ್ಯ ಇಲಾಖೆ ಸಿಂದಗಿ ಸಹಯೋಗದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸಿವ್ಹಿಲ್ ನ್ಯಾಯಾಧೀಶ ಮಾಹಾಂತೇಶ ಭೂಸಗೋಳ ಉದ್ಘಾಟಿಸಿದರು.
ಮಾನಸಿಕ ಖಾಯಿಲೆ ಎಲ್ಲರಿಗೂ ಒಂದು ಬಾರಿ ಬರಬಹುದು ಏಕೆಂದರೆ ಇಂದಿನ ಒತ್ತಡದ ಜೀವನದಲ್ಲಿ ಖಿನ್ನತೆಗೆ ಒಳಗಾಗುವವನು ಅದಕ್ಕೆ ಸೂಕ್ತವಾದ ಆಪ್ತಸಮಾಲೋಚನೆ ಮತ್ತು ಚಿಕಿತ್ಸೆ ಪಡೆದರೆ ಖಂಡಿತ ಗುಣಮುಖನಾಗುತ್ತಾನೆ ಎಂದು ಸಿವಿಲ್ ನ್ಯಾಯಾಧೀಶ ಮಹಾಂತೇಶ ಭೂಸಗೋಳ ಹೇಳಿದರು.
ನಗರದ ಪಿ.ಇ.ಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪಿ.ಇ.ಎಸ್ ಕಾಲೇಜು ಹಾಗೂ ತಾಲೂಕಾ ಆರೋಗ್ಯ ಇಲಾಖೆ ಸಿಂದಗಿ ಸಹಯೋಗದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಅಧ್ಯಯನ ದಲ್ಲಿ ಒತ್ತಡಕ್ಕೆ ಒಳಗಾಗದೆ ಅಧ್ಯಯನ ಮಾಡಬೇಕು. ಪರೀಕ್ಷೆ ಬಂದಾಗ ಮಾತ್ರ ಓದದೇ ದಿನಾಲೂ ಅಧ್ಯಯನ ಮಾಡಿದರೇ ಖಂಡಿತ ಯಶಸ್ಸು ಕಾಣುವಿರಿ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಮನೋರೋಗ ತಜ್ಞ ಮಂಜುನಾಥ ಮಸಳಿ ಮಾತನಾಡಿ, ಮಾನಸಿಕ ಖಾಯಿಲೆಯ ಲಕ್ಷಣಗಳು ಖಿನ್ನತೆ, ಬೇಜಾರು, ಆತಂಕ, ಜಿಗುಪ್ಸೆ, ಆತ್ಮಹತ್ಯೆಯಂತಹ ಆಲೋಚನೆಗಳ ಲಕ್ಷಣಗಳು ಕಂಡುಬಂದರೆ ಕೂಡಲೇ ಮನೋರೋಗದ ವೈದ್ಯರನ್ನು ಕಾಣಬೇಕು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಒತ್ತಡಕ್ಕೆ ಒಳಗಾಗದೇ ನಿರಂತರವಾಗಿ ಅಧ್ಯಯನ ಮಾಡಬೇಕು. ತಮ್ಮ ಸಮಸ್ಯೆಗಳನ್ನು ತಂದೆ ತಾಯಿ ಅಣ್ಣ ತಮ್ಮ ಶಿಕ್ಷಕರೊಂದಿಗೆ ಹಂಚಿಕೊಳ್ಳಬೇಕು ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಬಿ.ಪಿ.ಕರ್ಜಗಿ, ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ದೊಡಮನಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವೀರೇಂದ್ರ ಪವಾಡೆ, ಭಾಗ್ಯಶ್ರೀ , ಅಪರ ಸರಕಾರಿ ವಕೀಲ ಎಮ್.ಎಸ್.ಪಾಟೀಲ, ಸಹಾಯಕ ಸರಕಾರಿ ವಕೀಲ ಶ್ರೀಮತಿ ಎಪ್.ಜೆಡ್.ಖತೀಬ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಾಚಾರ್ಯ ರವಿ ಗೋಡಕರ ಸ್ವಾಗತಿಸಿದರು. ಪದವಿ ಕಾಲೇಜಿನ ಪ್ರಾಚಾರ್ಯ ಕಡಣಿ ನಿರೂಪಿಸಿದರು. ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ವಂದಿಸಿದರು.

