ವಿಜಯಪುರ : ಸೆಪ್ಟೆಂಬರ್ 17ರಂದು ನಿಗದಿಯಾಗಿದ್ದ ಯೋಗಥಾನ್-2022ರ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಸೆಪ್ಟೆಂಬರ್ 17ರ ಬೆಳಗ್ಗೆ 9 ಗಂಟೆಗೆ ನಗರದ ಸೈನಿಕ ಶಾಲಾ ಮೈದಾನದಲ್ಲಿ ಯೋಗಥಾನ್-2022ರ ಕಾರ್ಯಕ್ರಮದ ಮೂಲಕ ಗಿನ್ನೀಸ್ ವಿಶ್ವದಾಖಲೆ ನಿರ್ಮಿಸಲು ನಿರ್ಧರಿಸಲಾಗಿತ್ತು. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ, ವಿಧಾನಮಂಡಲದ ಅಧಿವೇಶನ ಮತ್ತು ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಪರೀಕ್ಷೆಗಳು ಆರಂಭಗೊಂಡಿರುವುದರಿಂದ ಹಾಗೂ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸೆ.17ರ ವಿಶ್ವದಾಖಲೆ ನಿರ್ಮಿಸುವ ಯೋಗಥಾನ್ ಕಾರ್ಯಕ್ರಮವನ್ನು ಮುಂದೂಡಲಾಗಿರುತ್ತದೆ.
ಯೋಗಥಾನ್-2022ಕ್ಕೆ ನೋಂದಣಿಯಾಗಿದ್ದ ಎಲ್ಲ ಶಾಲಾ ಕಾಲೇಜುಗಳು, ಯೋಗ ತರಬೇತಿದಾರರು, ಯೋಗ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಯೋಗಭ್ಯಾಸವನ್ನು ಮುಂದುವರೆಸಿಕೊಂಡು ಹೋಗುವುದು ಮತ್ತು ತದನಂತರದಲ್ಲಿ ತಿಳಿಸಲಾಗುವ ದಿನದಂದು ಗಿನ್ನೀಸ್ ವಿಶ್ವದಾಖಲೆ ರೂಪಿಸಲು ಸಿದ್ಧರಿರುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
